ಫ್ಯೋರ್ಡ್
	ಕಡಿದಾದ ಬದಿಗಳಿರುವ ಇಕ್ಕಟ್ಟಾದ ಕಡಲತೋಳು ಅಥವಾ ನೆಲ ಚಾಚು.  ಉನ್ನತ ಪರ್ವತಗಳಕಣಿವೆಗಳಲ್ಲಿ ಮತ್ತು ಧ್ರುವಗಳ ಸಮೀಪದ ಭೂಭಾಗಗಳಲ್ಲಿ ಶೇಖರವಾದ ಹಿಮರಾಶಿಗಳ ಹೆಚ್ಚಿನ ಭಾಗ ತನ್ನ ಮೇಲಿನ ಒತ್ತಡದ ಕಾರಣದಿಂದ ಹಿಮನದಿಗಳ ರೂಪದಲ್ಲಿ ಕೆಳಕಣಿವೆಗಳತ್ತ ಚಲಿಸುತ್ತದೆ.  ಹಿಮನದಿಗಳು ಜಲನದಿಗಳಂತೆಯೇ ಆದರೆ ಸ್ವಲ್ಪ ವ್ಯತ್ಯಾಸದಿಂದ ಭೂಭಾಗ ಕೊರೆಯುವ ಶಕ್ತಿಯುತ ಸಾಧನಗಳಾಗಿವೆ.  ಈ ಕಾರ್ಯಕ್ಕೆ ಹಿಮನದೀಕಾರ್ಯ ಅಥವಾ ನೀರ್ಗಲ್ಲ ಕೆಲಸವೆಂದು ಹೆಸರು.  ಮಧ್ಯ ಅಕ್ಷಾಂಶಗಳ ಕಣಿವೆಗಳಲ್ಲಿ ಹಿಮನದೀಕಾರ್ಯ ಕೊನೆಗೊಂಡುದರ ಗುರುತುಗಳನ್ನು ಸುಸ್ಪಷ್ಟವಾಗಿ ಕಾಣಬಹುದು.  ಆದರೆ ಅಕ್ಷಾಂಶ ಅಧಿಕತರವಾದ ಪ್ರದೇಶಗಳಲ್ಲಿ ಹಿಮನದಿ ತೊಟ್ಟಿ (ಬಾನೆ) ಆಕಾರದ ಕಣಿವೆಗಳನ್ನು ಕರಾವಳಿ ಅಂಚಿನವರೆಗೂ ರಚಿಸಿ ಈಗ ಕಾಣುವ ಸಮುದ್ರ ಮಟ್ಟಕ್ಕಿಂತ ಹೆಚ್ಚಿನ ಆಳಕ್ಕೆ ಇಳಿಯುವುದುಂಟು.  ಮುಂದೆ ಹಿಮ ದ್ರವಿಸಿ, ಸಮುದ್ರದ ತಳ ಮೇಲೇರಿ ಬಂದು ನೀರು ಹಿಮನದಿಯ ತೊಟ್ಟಿಯ ಕಣಿವೆಯನ್ನು ನುಗ್ಗಿಕೊಳ್ಳುತ್ತದೆ.  ಆಗ ಆ ಕರಾವಳಿಯ ಭಾಗ ಕಡಿದಾದ ಬದಿಗಳನ್ನು ಒಳಗೊಂಡ ಸಪುರ ಹಾಗೂ ಸುದೀರ್ಘ ಕಡಲತೋಳು ಅಥವಾ ಕವಲಾಗಿ ತೋರುತ್ತದೆ.  ಉದಾಹರಣೆಗೆ ನಾರ್ವೇಯ ಕಡಲತೀರ.  ಹಿಮನದಿಯ ದೆಸೆಯಿಂದ ಉಂಟಾದ ಈ ರೀತಿಯ ಕರಾವಳಿಯೇ ಫ್ಯೋರ್ಡ್.  ಕಡಲು ತೀರದವರೆಗೆ ಪರ್ವತಗಳು ಚಾಚಿಕೊಂಡಿರುವ ಅಧಿಕ ಅಕ್ಷಾಂಶ ಪ್ರದೇಶಗಳಲ್ಲಿ ಮಾತ್ರ ಫ್ಯೋರ್ಡುಗಳಿರಲು ಸಾಧ್ಯ.  ಬ್ರಿಟಿಷ್ ಕೊಲಂಬಿಯಾ, ಅಲಾಸ್ಕಾ ಅಲೆಬ್ರೊಡಾರ್ (ಉತ್ತರ ಅಮೆರಿಕ), ಗ್ರೀನ್‍ಲೆಂಡ್, ನಾರ್ವೆ, ಚಿಲಿ ಮತ್ತು ನ್ಯೂಝಿಲೆಂಡ್ (ಕೆಲಭಾಗ) ಈ ದೇಶಗಳ ಕರಾವಳಿಗಳಲ್ಲಿ ಇಂಥ ಫ್ಯೋರ್ಡುಗಳು ವೈಶಿಷ್ಟ್ಯಗಳಾಗಿವೆ.  ಪೂರ್ವ ಗ್ರೀನ್‍ಲೆಂಡಿನ ದಿ ಫ್ರಾನ್ಸ್ ಜೋಸೆಫ್ ಫ್ಯೋರ್ಡ್ 160 ಕಿಮೀ ಉದ್ದ 13 ಕಿಮೀ ಅಗಲವಿದ್ದು ಕೆಲವೆಡೆಗಳಲ್ಲಿ ಸಮುದ್ರಮಟ್ಟಕ್ಕಿಂತ 0.8ಕಿ.ಮೀಗೂ ಮಿಕ್ಕಿ ಆಳವಾಗಿದೆ.  ಪೆಟಗೋನಿಯಾದಲ್ಲಿ ಅತ್ಯಂತ ಆಳವಾದ (1295 ಮೀ) ಫ್ಯೋರ್ಡ್ ಇದೆ.  ಆಳ ನೀರಿನ ಸೌಲಭ್ಯ ಮತ್ತು ಭದ್ರ ಶಿಲಾಮಯ ಗೋಡೆಗಳಂತಿರುವ ಪರ್ವತಪ್ರದೇಶದ ರಕ್ಷೆ ಈ ಕಾರಣದಿಂದ ಫ್ಯೋರ್ಡುಗಳು ಜನವಸತಿ ಭಾಗಗಳಲ್ಲಿ ಉತ್ತಮ ನೌಕಾನಿಲ್ದಾಣಗಳಾಗಿಯೂ ಮೀನುಗಾರಿಕೆಯ ಕೇಂದ್ರಗಳಾಗಿಯೂ ಪ್ರಸಿದ್ಧವಾಗಿವೆ.  ಉದಾಹರಣೆಗೆ ಪಶ್ಚಿಮ ನಾರ್ವೇಯ ಸ್ಜೊನ್, ನಾರ್ವಿಕ್, ಓಸ್ಲೊ ಇತ್ಯಾದಿ.  ಕೆಲವು ಫ್ಯೋರ್ಡುಗಳು ಹಿಮಯುಗದ ಹಿಮರಾಶಿಗಳ ಅವಶೇಷಗಳಾಗಿಯೂ ಇವೆ. 
(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ